ಮಾನವತ್ವದ ಪ್ರಬಲ ಧ್ವನಿ

 


ಇಂದು ರಾಷ್ಟ್ರಕವಿ ಕುವೆಂಪು ಜನ್ಮದಿನ

ಧಾರ್ಮಿಕ ವಿಧಾನಗಳಿಗೆ ಧಾರ್ಮಿಕ ಕೇಂದ್ರಗಳು ಬಳಕೆಯಾಗದೆ ಜನಸಮು ದಾಯಗಳಸಕಾರಾತ್ಮಕ ಸ್ಥಿತ್ಯಂತರಕ್ಕೆ ಮುನ್ನುಡಿ ಬರೆದು, ಮನುಷ್ಯ ಸುಧಾರಣೆಯ ದೃಢ ಹೆಜ್ಜೆಗಳನ್ನು ಪ್ರಕಟಿಸಿ, ಸರ್ವರೂ ಭಗವಂತನ ಸೃಷ್ಟಿ ಎನ್ನುವ ನೈಜ ಸತ್ಯ ರೂಪಿಸುವತ್ತ ಕಾರ್ಯೋನ್ಮುಖವಾಗಲಿ ಎನ್ನುವ ಸದಾಶಯವನ್ನು ಹೊಂದಿದ್ದರು

 ಇಂದು ವಿಶ್ವಮಾನವ ದಿನಾಚರಣೆಯನ್ನು ಇಡೀ ನಾಡಿನಾದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಕನ್ನಡ ಸಾಹಿತ್ಯಕ್ಕೊಂದು ಚಲನಶೀಲತೆ, ಗತಿಶೀಲತೆ ತಂದುಕೊಟ್ಟ ಕನ್ನಡ ಸಾಹಿತ್ಯದ ತಪಸ್ವಿ ಕುವೆಂಪು ಅವರ ಜನ್ಮದಿನವನ್ನು ವಿಶ್ವ ಮಾನವ ದಿನವಾಗಿ ಆಚರಿಸಲಾಗುತ್ತದೆ. ಬಹು ಆಯಾಮಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಸೃಜನಶೀಲತೆಯನ್ನು ತುಂಬಿದವರು. ಸಾಹಿತ್ಯವನ್ನು ಕವಿತೆ, ಕವನ, ನಾಟಕ, ಕಾದಂಬರಿ ಪರಿಧಿಯಿಂದ ನೋಡದೆ ಕನ್ನಡ ಸಾಹಿತ್ಯವನ್ನು ಜನಭಾಷೆಯನ್ನಾಗಿ ನಿರೂಪಿಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ. ಹಾಗಾಗಿ ಕುವೆಂಪು ಅವರನ್ನು ಕವಿ, ನಾಟಕಕಾರ, ರಚನಾಕಾರ ನೆಲೆಯಿಂದ ಗ್ರಹಿಸದೆ, ಸಾಹಿತ್ಯದ ಹೊಸ ಆಲೋಚನಾ ಕ್ರಮ ಎನ್ನುವ ವಿಸ್ತಾರದ ದೃಷ್ಟಿಯಿಂದ ಇಂದಿನ ಯುವಸಮುದಾಯ ಭಾವಿಸಬೇಕಿದೆ.


ಬಹುತ್ವದ ಭಾರತಕ್ಕೆ ಬೇಕಾಗುವ ಮೌಲಿಕವಾದ ಸಾರ್ವಕಾಲಿಕವಾದ ಚಿಂತನೆಗಳನ್ನು ರೂಪಿಸಿ, ಸಮಗ್ರತೆಯ ಬೀಜವನ್ನು ಬಿತ್ತಿ ಸಮಾನತೆಯ ವಾತಾವರಣವನ್ನು ಹುಟ್ಟುಹಾಕಿದ ಕುವೆಂಪು ಶ್ರೇಣೀಕರಣವನ್ನು ವಿರೋಧಿಸಿದವರು. ಭವಿಷ್ಯದ ದಾರಿದೀಪವಾಗಿ ಅವರು ಗೋಚರವಾಗುತ್ತಾರೆ. ಜಾತಿ, ಧರ್ಮ, ವರ್ಗ ಉಂಟುಮಾಡುವ ಅವಘಡಗಳನ್ನು ಸಮಾಜದೆದುರು ತೆರೆದಿಟ್ಟ ಮಹಾನ್ ಸಮಾಜವಾದಿ ಧೋರಣೆಯ ವ್ಯಕ್ತಿತ್ವ ಕುವೆಂಪು ಅವರದು. ಮಠ, ಮಂದಿರ, ಮಸೀದಿ, ಚರ್ಚುಗಳು ಧಾರ್ಮಿಕ ಕೇಂದ್ರಗಳಾಗದೆ, ಭಾವೈಕ್ಯತೆಯನ್ನು ಹರಡುವ ಮನುಜಮತ ಕೇಂದ್ರಿತ ಸ್ಥಳಗಳಾಗಬೇಕೆಂಬ ಮಹೋನ್ನತ ಆಶಾವಾದವನ್ನು ಬಲವಾಗಿ ನಿರೂಪಿಸಿ ವಿಶ್ವಮಾನವ ತತ್ವವನ್ನು ಸೃಜಿಸಿದ ಅವರು ಜಾತಿ, ಧರ್ಮ, ವರ್ಗದ ಮಿಥ್ಯಗಳನ್ನು ಕಳಚಿದ ಓರ್ವ ಸಮಾಜಮುಖಿ ಚಿಂತಕರಾಗಿದ್ದಾರೆ. ಅವರ ಸಮಗ್ರ ಸಾಹಿತ್ಯಕ ಕೊಡುಗೆಗಳನ್ನು ಗಮನಿಸಿದಾಗ ನೆಲಮೂಲದ ಅನೇಕ ಸಮಸ್ಯೆ ಮತ್ತು ಸವಾಲುಗಳನ್ನು ದಾಖಲಿಸಿ ಅವುಗಳ ಪರಿಹಾರಕ್ಕಾಗಿ ಮಿಡಿದ ಸಹೃದಯತೆ ವ್ಯಕ್ತವಾಗುತ್ತದೆ. ಮಲೆನಾಡಿನ ಸಮೃದ್ಧ ವಾತಾವರಣದಲ್ಲಿ ಬೆಳೆದರೂ ಮಲೆನಾಡಿನಾಚೆಯ ಸಂಗತಿಗಳ ಬಗ್ಗೆ ದೂರದೃಷ್ಟಿಯನ್ನು ಹೊಂದಿದ್ದ ಅವರು ಆ ಎಲ್ಲಾ ವಿದ್ಯಮಾನಗಳನ್ನು ವಸ್ತುನಿಷ್ಟವಾಗಿ ವಿವೇಚಿಸಿ ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಶ್ರಮಿಸಿದವರು. ಕುವೆಂಪು ಅವರ ಜಾಗತಿಕ ಮನ್ನಣೆ ಪಡೆದ ಚಿಂತನಧಾರೆಯಾದ ಪಂಚತತ್ವಗಳು ನಿರೂಪಣೆಯ ನಿಲುವನ್ನು ಪ್ರಬಲವಾಗಿ ವಿರೋಧಿಸುತ್ತವೆ. ಮನುಷ್ಯನಿರ್ಮಿತ ಅಸತ್ಯ, ಮೌಡ್ಯ, ಕಂದಾಚಾರಗಳು ಕಲ್ಯಾಣಪರತೆ, ಜೀವನ್ಮುಖಿ ಭಾವಗಳನ್ನು ಮೊಟಕುಗೊಳಿಸುತ್ತದೆ ಎನ್ನುವ ಬಲವಾದ ನಿಲುವನ್ನು ಹೊಂದಿದ್ದ ಅವರು ನಿಸರ್ಗದ ಕೊಡುಗೆ ಸಮತೆಯನ್ನು ಸರ್ವರೂ ಅಪ್ಪಿಕೊಳ್ಳಬೇಕಾದ ಜರೂರನ್ನು ಪ್ರತಿಪಾದಿಸಿ, ಜಾತಿ, ಧರ್ಮ, ವರ್ಣ ಪ್ರಾದೇಶಿಕತೆಯನ್ನು ಮೀರಿ ಮನುಷ್ಯ ವಿಶ್ವಮಾನವನಾಗಬೇಕು ಎಂಬ ನಿಷ್ಕಲ್ಮಶ ಹಂಬಲವನ್ನು ಹೊಂದಿದ್ದರು.


ಇವರ ವಿಚಾರಧಾರೆಗಳು ಜನಮನಸ್ಸಿನ ಮೇಲೆ ಅಪಾರವಾದ ಪ್ರಭಾವವನ್ನು ಬೀರಿ ಸಮಾಜದ ಸ್ಥಿತ್ಯಂತರ ಬದಲಾವಣೆಯನ್ನು ತಂದಿವೆ.


ಇಂತಹ ಬಹುಮುಖಿ ಕೊಡುಗೆಗಳ ಒಡೆಯನಾದ ಕುವೆಂಪ ಚಿಂತನೆಗಳು ಸಮಕಾಲಿನ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತವೆ. ಇಂತಹ ಅರ್ಥಪೂರ್ಣ ಸಾಹಿತ್ಯರತ್ನನ ಮುನ್ನೋಟಗಳು ಮುಂದೆಯೂ ಸಮಾಜದಲ್ಲಿ ಸಮೃದ್ಧತೆಯನ್ನು ಹರಡಲಿ ಇದಕ್ಕಾಗಿ ಸಮಾಜ ವ್ಯಾಪಕವಾಗಿ ತೆರೆದುಕೊಂಡು ಸ್ಪಂದನಾಶೀಲ ಗುಣ ಬೆಳೆಸಿಕೊಳ್ಳುವಂತಾಗಲಿ.

ಡಾ. ಸಾಯಿಬಣ್ಣ ಮೂಡಬುಳ


Comments

Popular posts from this blog

ಬದುಕಿದಾಗ ಒಂದು ಗುಲಾಬಿ ಕೊಡಬಾರದೆ?

ಚೌಧರಿ ಚರಣ ಸಿಂಗ್" ಬಗ್ಗೆ ಬಲ್ಲಿರಾ ?

ಯುವ ನಿಧಿಗೆ ಅರ್ಜಿ ಹಾಕಲು ಕಡ್ಡಾಯವಾಗಿ ಇರಬೇಕಾದ ದಾಖಲೆಗಳು