ಕುವೆಂಪು ಕಂಡರೆ ಮನುವಾದಿಗಳಿಗೇಕೆ ಉರಿ?
*ಕುವೆಂಪು ಕಂಡರೆ ಮನುವಾದಿಗಳಿಗೇಕೆ ಉರಿ?*
ಕುವೆಂಪು ಮನುವಾದಿಗಳ ಪಾಲಿಗೆ ಯಾವತ್ತಿಗೂ ಸಿಂಹಸ್ವಪ್ನ. ಈ ಭಯ-ಆತಂಕಗಳೇ ಮನುವಾದಿಗಳನ್ನು ಒಳಗೊಳಗೇ ಉರಿದು ಬೀಳುವಂತೆ ಮಾಡುತ್ತಿವೆ. ಅಷ್ಟಕ್ಕೂ ಮನುವಾದಿಗಳಿಗೆ ಕುವೆಂಪು ಸಿಂಹಸ್ವಪ್ನವೇಕೆ ಎಂಬುದನ್ನು ಮುಂದೆ ನೋಡಿ.
ಕುವೆಂಪು ಅವರ ಕಾವ್ಯದ ಈ ಸಾಲುಗಳನ್ನು ಒಮ್ಮೆ ಓದಿ...
"ಯಾವ ಕಾಲದ ಶಾಸ್ತ್ರವೇನು ಹೇಳಿದರೇನು
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು
ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು'
*ಮನುವನ್ನು ಮತ್ತು ಮನುವಾದವನ್ನು ಧಿಕ್ಕರಿಸುವ ಮಾತುಗಳಿವು* . ಇಷ್ಟು ಅರ್ಥ ಮಾಡಿಕೊಂಡರೆ ಸಾಕು ಮನುವಾದಿಗಳು ಜಾರಿಗೆ ತಂದ ಮೌಢ್ಯಾಚರಣೆಗಳು ಮೂಲೆಗುಂಪಾಗುತ್ತವೆ. ಇವು ಮೂಲೆಗುಂಪಾದರೆ ಅವರ ಪೌರೋಹಿತ್ಯ ಮತ್ತು ಇತರೆ ಮೌಢ್ಯಾಧಾರಿತ ಕುಲಕಸುಬುಗಳು ಇಲ್ಲವಾಗುತ್ತವೆ.
ಸಮಾನತೆ, ವಿಶ್ವಮಾನವತೆ ಸಾರುವ ಹಾಗೂ ಮೌಢ್ಯದ ಕಟ್ಟುಪಾಡುಗಳನ್ನು ಕಿತ್ತೆಸೆಯಲು ಕರೆ ನೀಡುವ ಕುವೆಂಪು ಸಾಹಿತ್ಯ ಜನರಿಗೆ ಹೆಚ್ಚೆಚ್ಚು ಅರ್ಥವಾದಂತೆಲ್ಲಾ ಮನುವಾದಿಗಳು ತಮ್ಮ ಮೇಲ್ಪಂಕ್ತಿಯನ್ನು ಕಳೆದುಕೊಳ್ಳುತ್ತಾರೆ.
ಇದೇ ಮನುವಾದಿಗಳ ಭಯಕ್ಕೆ ಮೂಲ ಕಾರಣ. ಈ ಭಯಕ್ಕೇ ಕುವೆಂಪು ಅವರನ್ನು ಮೂಲೆಗುಂಪು ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. *ಹೆಸರು ಕುಗ್ಗಿಸಿದ ನಂತರ ಅವರ ಸಾಹಿತ್ಯವನ್ನು ದೂರ ಇಡುತ್ತಾರೆ* . *ಮನುವಾದಿಗಳ ಬುಡ ಅಲುಗಾಡಿಸುವ ಸಾಹಿತ್ಯ ಜನರನ್ನು ತಲುಪಬಾರದು ಎಂಬುದು ಇವರ ಅಜೆಂಡಾ* . ಹಾಗೆಯೇ, ಮನುವಾದವನ್ನು ಮತ್ತದರ ಮೌಢ್ಯಗಳನ್ನು ಧಿಕ್ಕರಿಸಿ ನಿಂತ ಹಾಗೂ ಸಮಾನತೆಯನ್ನು ಅಪ್ಪಿಕೊಂಡ ಬ್ರಾಹ್ಮಣರೂ ಸಾಕಷ್ಟಿದ್ದಾರೆ. ಹೀಗಾಗಿ, ಬೆರಳೆಣಿಕೆಯಷ್ಟಾಗಿರುವ ಮನುವಾದಿಗಳಿಗೆ ಇನ್ನಷ್ಟು ಕೃಶವಾಗುವ ಆತಂಕವಿದೆ. ಹಾಗಾಗಬಾರದು ಎಂದರೆ ಸಮಾನತೆ ಸಾರುವ, ಮೌಢ್ಯಗಳನ್ನು ವಿರೋಧಿಸುವ ಸಾಹಿತ್ಯ ಜನರನ್ನು ತಲುಪಬಾರದು. ಆಗ ದೇಶಭಕ್ತಿ ಹೆಸರಲ್ಲಿ ಮನುವಾದವನ್ನು ಜನರ ತಲೆಯಲ್ಲಿ ತುಂಬಿ ತಮ್ಮ ಪರ ಹೊಡೆದಾಡುವಂತಹ ಗುಂಪು ಕಟ್ಟಿಕೊಳ್ಳಬಹುದು. ಈ ಅಜೆಂಡಾ ಜಾರಿಮಾಡುವ ಪ್ರಯತ್ನಗಳಲ್ಲಿ ಒಂದು ಎಂಬಂತೆ ಮನುವಾದಿಗಳೀಗ ಕುವೆಂಪು ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಶತೃವನ್ನು ಗೆಲ್ಲುವ ತಾಕತ್ತು ಇಲ್ಲದಿದ್ದಾಗ ವಾಮ ಮಾರ್ಗ ಅನುಸರಿಸಬೇಕು ಎಂಬುದು ಮನುವಾದಿಗಳಿಗೆ ಕರಗತವಾದ ಸಂಗತಿ.
*ಕುವೆಂಪು ದ್ವೇಷಿಸಲು ಇನ್ನೂ ಕೆಲ ಕಾರಣಗಳಿವೆ.*
ಅಕ್ಷರ ಕಲಿಯುವ ಶೂದ್ರನ ನಾಲಿಗೆ ಕತ್ತರಿಸಬೇಕು, ಕಿವಿಗೆ ಕಾದ ಸೀಸ ಸುರಿಯಬೇಕು ಎನ್ನುವ ಮನ(ನು)ಸ್ಥಿತಿಯ ಕಾಲಘಟ್ಟದಲ್ಲಿ ಸಂಸ್ಕೃತವನ್ನು ಕಲಿತು, ಮನು ವಾದವನ್ನು ಮೆಟ್ಟಿ ನಿಂತ ಮೊದಲ ಶೂದ್ರ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. ಅದಕ್ಕೆಂದೇ ಅವರು 'ಶೂದ್ರ ತಪಸ್ವಿ' ಬರೆಯುತ್ತಾರೆ. ಇದನ್ನು ಬ್ರಾಹ್ಮಣ್ಯ ಆಚರಿಸುವ ಬ್ರಾಹ್ಮಣರಿಗೆ ಅಂದಿಗೂ, ಇಂದಿಗೂ ಸಹಿಸಿಕೊಳ್ಳಲು ಆಗಿಲ್ಲ. ಅದಕ್ಕೆ ಅವರು ಬರೆದದ್ದನ್ನ ಅಂದಿನಿಂದ ಇಂದಿನವರೆಗೂ ಟೀಕಿಸುತ್ತಲೇ ಇದ್ದಾರೆ. ಇಂತಹ ಟೀಕೆಗೂ ಪುಟ್ಟಪ್ಪ ಉತ್ತರ ಕೊಟ್ಟಿದ್ದಾರೆ. "ನಾನೇರುವ ಎತ್ತರಕ್ಕೆ ನೀನೇರಬಲ್ಲೆಯಾ" ಅಂತ ಕಾವ್ಯದ ಮೂಲಕವೇ ಉತ್ತರಿಸಿದ್ದಾರೆ. ಬಹುಶಃ ಇದನ್ನಂತೂ ಅವರಿಗೆ ಯಾವತ್ತೂ ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ!
*ಆಳವಾದ ಅಧ್ಯಯನ, ಜ್ಞಾನ ಮತ್ತು ಸೃಜನಶೀಲತೆ ಇದ್ದುದಕ್ಕೇ ಅವರಿಗೆ ಜ್ಞಾನಪೀಠ ಸಿಕ್ಕಿದ್ದು. ಶಿಕ್ಷಣ ಇಲಾಖೆಯ ಹೆಬ್ಬೆಟ್ಟುಗಳು ಹೇಳಿದಂತೆ ಯಾರೋ ಬೆಂಬಲಿಸಿದ್ದಲ್ಲ. ಕನ್ನಡದ ಮೊದಲ ಜ್ಞಾನಪೀಠ, ಅದೂ ಶೂದ್ರ ಸಮುದಾಯದಲ್ಲಿ ಹುಟ್ಟಿದ ಪುಟ್ಟಪ್ಪರಿಗೆ ಸಿಕ್ಕಿದ್ದು ಬ್ರಾಹ್ಮಣ್ಯದ ಅಮಲಿನಲ್ಲಿದ್ದ ಬ್ರಾಹ್ಮಣರಿಗೆ ಅರಗಿಸಿಕೊಳ್ಳಲಾಗದ ಸಂಗತಿ.* ಶತಮಾನಗಳ ಕಾಲ ಶಾನುಭೋಗನ ಹೊಲದಲ್ಲಿ ಕೂಲಿ ಮಾಡಿಕೊಂಡಿದ್ದ ಶೂದ್ರ ತನಗಿಂತಲೂ ಬುದ್ಧಿವಂತ ಎನ್ನಿಸಿಕೊಳ್ಳುವುದನ್ನು ಮನುವಾದಿಗಳಿಗೆ ಎಂದಿಗೂ ಸಹಿಸಿಕೊಳ್ಳಲು ಆಗುವುದಿಲ್ಲ. ಇವೆಲ್ಲವೂ ಮನುವಾದಿಗಳ ಪಾಲಿಗೆ ದುಸ್ವಪ್ನಗಳೇ. ' *ಮಂತ್ರ ಮಾಂಗಲ್ಯ* ' ಕೂಡ ಇವರ ದುಸ್ವಪ್ನಗಳಲ್ಲೊಂದು.
*ನಿಸ್ಸಂದೇಹವಾಗಿ ಕರುನಾಡಿನ ಅಗ್ರಗಣ್ಯ ಕವಿ ಕುವೆಂಪು. ಇಂತಹ ಮೇರು ಸಾಹಿತಿಯನ್ನು ಅಪಮಾನಿಸಿದ ಬಿಜೆಪಿ ನಡೆ ತೀರ ಕ್ಷುಲ್ಲಕ ಮತ್ತು ಅಕ್ಷಮ್ಯ.* ಗೌರಿ ಲಂಕೇಶ್ ಬದುಕಿದ್ದಾಗ ಅವರ ಬಗ್ಗೆ ಚಕಾರ ಎತ್ತಲೂ ಹೆದರುತ್ತಿದ್ದ ಮತ್ತು ಅವರು ಮೃತಪಟ್ಟ ಕೂಡಲೇ ಎದೆ ಸೆಟೆದು ನಿಂತು ಅವರ ವಿರುದ್ಧ ಮನಬಂದಂತೆ ಬರೆದು ತನ್ನ ದ್ವೇಷ ತೀರಿಸಿಕೊಂಡ ಕನ್ನಡದ ಕುಖ್ಯಾತ ಪತ್ರಕರ್ತನ ಪತ್ರಿಕೆಗೆ ಅಂಕಣ ಬರೆಯುವ ರೋಹಿತ, *ಗುಡಿಪೂಜೆಗೆ ಸೀಮಿತನಾದ ಲಕ್ಷ್ಮಣನಂತವರು ಕುವೆಂಪು ಬಗ್ಗೆ ಕೀಳಾಗಿ ಮಾತನಾಡುವುದು ಆನೆಯನ್ನು ಕಂಡು ನಾಯಿ ಬೊಗಳಿದ್ದಕ್ಕೆ ಸಮ.*
*ಕುವೆಂಪು ಬಗ್ಗೆ ಈ ನಾಡಿಗೆ ಕನಿಷ್ಟವಾದರೂ ಗೌರವ ಇದ್ದರೆ ಈ ಮುಠ್ಠಾಳರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.* ಆದರೆ, ಮನುವಾದಿಗಳ ತಾಳಕ್ಕೆ ಕುಣಿಯುತ್ತಿರುವ, ರೋಹಿತನನ್ನು ಐಐಟಿ ಪ್ರೊಫೆಸರ್ ಎಂದು ಸುಳ್ಳು ಹೇಳುವ/ಸಮರ್ಥಿಸಿಕೊಳ್ಳುವ ಬಿಜೆಪಿ ಸರ್ಕಾರದಿಂದ ನಾವಿದನ್ನು ಬಯಸುವುದು ಕಷ್ಟ.
*ಮನುವಾದಿಗಳ ಕುವೆಂಪು ದ್ವೇಷಕ್ಕೆ ಕಾರಣವಾಗಿರುವ ಕಾವ್ಯವನ್ನು ಈಗಲಾದರೂ ಒಮ್ಮೆ ಓದಿ ಅರ್ಥೈಸಿಕೊಳ್ಳಿ*
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು
ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು
ನಿನ್ನೆದೆಯ ದನಿಯ ಋಷಿ
ಮನು ನಿನಗೆ ನೀನು ಮನು ನಿನಗೆ ನೀನು
ನೀರಡಸಿ ಬಂದ ಸೋದರಗೆ ನೀರನು ಕೊಡಲು
ಮನುಧರ್ಮ ಶಾಸ್ತ್ರವೆನಗೊರೆಯ ಬೇಕೇನು
ನೊಂದವರ ಕಂಬನಿಯನೊರಸಿ ಸಂತೈಸುವರೆ
ಶಾಸ್ತ್ರ ಪ್ರಮಾಣ ಅದಕಿರಲೇ ಬೇಕೇನು
ಹಿಂದಿನ ಋಷಿಗಳು ಮಾನವರೆ ನಮ್ಮಂತೆ
ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ
ಕಾಲಕ್ಕೆ ತಕ್ಕಂತೆ ದೇಶಕ್ಕೆ ತಕ್ಕಂತೆ
ನಮ್ಮ "ಹೃದಯ"ವೇ ನಮಗೆ ಶ್ರೀ ಧರ್ಮ ಸೂತ್ರ
- ಕು.ವೆಂ.ಪು

Comments
Post a Comment