ಗಾಂಧಿ - ಅಂಬೇಡ್ಕರ್ ಶತ್ರುಗಳಲ್ಲ, ಕೋಮುವಾದಿಗಳು ಮಿತ್ರರಲ್ಲ
ಜನಸಾಮಾನ್ಯರ ನಿತ್ಯದ ಬದುಕನ್ನು ಸುಡುತ್ತಿರುವ ಜ್ವಲಂತ ಸಮಸ್ಯೆಗಳನ್ನು ಮರೆಮಾಚಲು *ಕಾರ್ಪೊರೇಟ್ - ಕೋಮುವಾದಿ ಮೈತ್ರಿಕೂಟ* ನಮ್ಮನ್ನು ದಾರಿ ತಪ್ಪಿಸುತ್ತಲೇ ಇರುತ್ತದೆ. *ಪ್ರಸಕ್ತ ವಿದ್ಯಮಾನಗಳು* ಚರ್ಚೆಗೆ ಬಾರದಂತೆ ಪುರಾಣದ, ಇತಿಹಾಸದ ಯಾವುದೋ ವಿಷಯಗಳ ಸುತ್ತ ನಾವು ಗಿರಕಿ ಹೊಡೆಯುವಂತೆ ಮಾಡಲಾಗುತ್ತದೆ. ಅಯೋಧ್ಯೆಯ ರಾಮ ಮಂದಿರ, ಮಥುರಾದ ಕೃಷ್ಣ ದೇವಾಲಯ, ಕಾಶಿಯ ಶಿವ ದೇವಾಲಯಗಳ ವಿವಾದಗಳನ್ನು ಕೆರಳಿಸಿ ಅದರ ಸುತ್ತ ನಾವು ಗಾಣದ ಎತ್ತಿನಂತೆ ಸುತ್ತುವಂತೆ ಮಾಡಲಾಗುತ್ತದೆ. *ಬಿಜೆಪಿ* ಸತತವಾಗಿ ಗೆಲ್ಲುತ್ತಿರುವುದು ಇಂಥಾ *ದಗಾಕೋರ* ಆಟಗಳಿಂದ.
*ಡಾ.ಅಂಬೇಡ್ಕರ್* ಮತ್ತು *ಗಾಂಧೀಜಿ* ಇವರಿಬ್ಬರೂ ಈಗಿಲ್ಲ. ಅವರು ಮಾಡಿಕೊಂಡ *ಪೂನ ಒಪ್ಪಂದಕ್ಕೂ ಏಳು ದಶಕಗಳು ಕಳೆದು ಹೋದವು.* ಅವರ ಆಗಿನ ಭಿನ್ನಾಭಿಪ್ರಾಯ ಮತ್ತು ವೈಮನಸ್ಸು ಆಗಿನ ಕಾಲಕ್ಕೆ ಮುಗಿಯಿತು. ಅಂದಿಗೂ ಇಂದಿಗೂ ಭಾರತದ ಮತ್ತು ಜಗತ್ತಿನ ಸ್ಥಿತಿಗತಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೊಸ ಸವಾಲುಗಳು ನಮ್ಮ ಕಣ್ಣೆದುರು ಬಂದು ನಿಂತಿವೆ. *ಮಹಾತ್ಮಾ ಗಾಂಧೀಜಿಯ ಸರ್ವೋದಯ ಸಿದ್ದಾಂತ* ಜಾಗತೀಕರಣದ ಲಾಭಕೋರತನದ ಸುಡು ಬೆಂಕಿಯಲ್ಲಿ ಬೆಂದು ಹೋಗುತ್ತಿದೆ. *ಬಾಬಾಸಾಹೇಬರ ಮೀಸಲು ವ್ಯವಸ್ಥೆಯನ್ನೇ ಅಪ್ರಸ್ತುತಗೊಳಿಸುವ, ಸಂವಿಧಾನವನ್ನೇ ಬುಡಮೇಲು ಮಾಡಿ ಪಂಚಾಗವನ್ನು ದೇಶದ ಮೇಲೆ ಹೇರುವ ಮಸಲತ್ತು* ಅವ್ಯಾಹತವಾಗಿ ನಡೆದಿದೆ. ಇದೆಲ್ಲದರ ನಡುವೆ ಸಾಮಾಜಿಕ ಜಾಲತಾಣದಲ್ಲಿ *ಗಾಂಧೀಜಿ ಮತ್ತು ಅಂಬೇಡ್ಕರ್* ರ ನಡುವೆ *ಬೀದಿ ಕಾಳಗ* ನಡೆದಿದೆಯೇನೋ ಎಂಬ ರೀತಿ ವಾಗ್ವಾದಗಳು ನಡೆಯುತ್ತಿವೆ.
*ಸ್ವಾತಂತ್ರ್ಯ ಹೋರಾಟ* ದ ಆ ದಿನಗಳಲ್ಲಿ *ಗಾಂಧಿ ಮತ್ತು ಅಂಬೇಡ್ಕರ್* ನಡುವಿನ ಭಿನ್ನಾಭಿಪ್ರಾಯ *ತಾತ್ವಿಕ* ವಾಗಿತ್ತು. *ದೇಶಕ್ಕೆ ಸ್ವಾತಂತ್ರ್ಯ* ಎಂಬುದಕ್ಕೆ *ಗಾಂಧೀಜಿ ಮೊದಲ ಆದ್ಯತೆ* ಆಗಿದ್ದರೆ, ಈ ಸ್ವಾತಂತ್ರ್ಯ ಬಂದರೂ ನನ್ನ ಸಮುದಾಯಗಳಿಗೆ *ನೈಜ ಸ್ವಾತಂತ್ರ್ಯ ಸಿಗುವುದಿಲ್ಲ* ಎಂಬುದು *ಅಂಬೇಡ್ಕರ್* ಅವರ ನಿಲುವಾಗಿತ್ತು. *ಸ್ವಾತಂತ್ರ್ಯದ ಗುರಿ ಸಾಧನೆಗಾಗಿ ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದಕ್ಕೆ ಗಾಂಧೀಜಿ ಅವರ ಮೊದಲ ಪ್ರಾಶಸ್ತ್ಯವಾಗಿತ್ತು.*
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೆ ಅದೊಂದರಿಂದ ಮಾತ್ರ ದುಡಿಯುವ ದಲಿತ ಸಮುದಾಯಗಳಿಗೆ ಬಿಡುಗಡೆ ಸಿಗುವುದಿಲ್ಲ. ಸ್ವತಂತ್ರ್ಯ ಭಾರತದಲ್ಲೂ ಅವರು *ಶ್ರೇಣೀಕೃತ ಜಾತಿ ವ್ಯವಸ್ಥೆಯ ಗುಲಾಮಗಿರಿ* ಯಲ್ಲೇ ನರಳಬೇಕಾಗುತ್ತದೆ. ಅದಕ್ಕಾಗಿ *"ಸ್ವತಂತ್ರ್ಯ ಭಾರತದಲ್ಲಿ ನನ್ನ ಜನರಿಗೇನು"* ಎಂಬ ಪ್ರಶ್ನೆಯನ್ನು ಬಾಬಾ ಸಾಹೇಬರು ಎತ್ತಿದರು. ಇದು ಸೂಕ್ತವೂ ಆಗಿತ್ತು. ಬ್ರಿಟಿಷರು ಮತ್ತು ಮೊಗಲರು ಬರುವ ಮೊದಲಿನಿಂದಲೂ ಯಾತನೆ ಪಡುತ್ತಿದ್ದ ಕರ್ಮ ಸಿದ್ಧಾಂತದಲ್ಲಿ ಅಗೋಚರ ಬೇಡಿಗಳಿಂದ ಬಂಧಿತರಾಗಿದ್ದ ನನ್ನ ಜನರಿಗೆ ಸ್ವಾತಂತ್ರ್ಯ ಯಾವಾಗ ಎಂದು ಪ್ರಶ್ನಿಸಿದ ಅವರು ಪಟ್ಟು ಹಿಡಿದರು. ಪೂನಾ ಒಪ್ಪಂದದ ಸಂದರ್ಭದಲ್ಲಿ ಉಪವಾಸ ಕುಳಿತಿದ್ದ ಗಾಂಧೀಜಿಯವರನ್ನು ಬದುಕಿಸಲು ಒಂದಿಷ್ಟು ರಾಜಿ ಮಾಡಿಕೊಂಡು ಅಂಬೇಡ್ಕರ್ ತಮ್ಮ ಗುರಿ ಸಾಧಿಸಿದರು. ಇವರಿಬ್ಬರ ನಡುವೆ *ವೈಯಕ್ತಿಕ ಹಗೆತನ* ಇರಲಿಲ್ಲ. *ಶತಮಾನಗಳ ನೋವಿನಿಂದ ಅಂಬೇಡ್ಕರ್ ಗಾಂಧೀಜಿಯನ್ನು ಬೈದರೂ ಅದರಲ್ಲಿ ನಂಜಿರಲಿಲ್ಲ. ಇದು ಗಾಂಧೀಜಿಗೂ ಗೊತ್ತಿತ್ತು. ಅಂತಲೇ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷತೆ ಪ್ರಶ್ನೆ ಎದುರಾದಾಗ ಗಾಂಧೀಜಿ ಬಾಬಾ ಸಾಹೇಬರ ಹೆಸರನ್ನು ಸೂಚಿಸಿದರು.*


Comments
Post a Comment